ಒಕ್ಕಲಿಗ ಸಮುದಾಯಕ್ಕೆ ತುರ್ತು ಕರೆ: 'ಒಕ್ಕಲುತನ' ಉಳಿಸಿ, ಒಗ್ಗಟ್ಟು ಸಾಧಿಸಿ, ನಾಯಕತ್ವದ ಹೊಣೆಗಾರಿಕೆ ಅರಿತುಕೊಳ್ಳಿ!

ಇಂದಿನ ರಾಜಕೀಯ ಮತ್ತು ಸಾಮಾಜಿಕ ಸನ್ನಿವೇಶದಲ್ಲಿ ಒಕ್ಕಲಿಗ ಸಮುದಾಯದ ನಾಯಕತ್ವ, ಒಗ್ಗಟ್ಟು ಮತ್ತು 'ಒಕ್ಕಲುತನ'ದ ಸಂಪ್ರದಾಯದ ಅವನತಿ ಕುರಿತು ತೀವ್ರ ಕಳವಳ ವ್ಯಕ್ತವಾಗಿದೆ. ಕೆಂಪೇಗೌಡರ ಆಶಯಗಳನ್ನು ಮರೆತು, ಸ್ವಾರ್ಥ ರಾಜಕಾರಣ ಮತ್ತು ಕುಟುಂಬ ರಾಜಕಾರಣಕ್ಕೆ ಸೀಮಿತರಾಗಿರುವ ನಾಯಕರ ವಿರುದ್ಧ ಆಕ್ರೋಶ ಹೊರಹಾಕಲಾಗಿದೆ. ಮಠಾಧೀಶರು ಮತ್ತು ಪ್ರಭಾವಿ ವ್ಯಕ್ತಿಗಳು ಒಳಪಂಗಡಗಳ ಐಕ್ಯತೆ ಹಾಗೂ ಕೃಷಿ ಮೂಲದ ಸಂಪ್ರದಾಯವನ್ನು ಉಳಿಸಲು ಕೂಡಲೇ ಎಚ್ಚೆತ್ತು, ಸಮುದಾಯವನ್ನು ಮುನ್ನಡೆಸಬೇಕು. ಇಲ್ಲವಾದರೆ, ಮುಂದಿನ ಪೀಳಿಗೆಯ ಭವಿಷ್ಯ ಆತಂತ್ರವಾಗಲಿದೆ ಎಂಬ ಸ್ಪಷ್ಟ ಎಚ್ಚರಿಕೆ

VOKKALIGA COMMUNITY DEVELOPMENT AND UNITY FORMATION IN ACTION

Rohan Gowda

11/7/20251 min read

ಒಕ್ಕಲಿಗ ಸಮುದಾಯಕ್ಕೆ ತುರ್ತು ಕರೆ: 'ಒಕ್ಕಲುತನ' ಉಳಿಸಿ, ಒಗ್ಗಟ್ಟು ಸಾಧಿಸಿ, ನಾಯಕತ್ವದ ಹೊಣೆಗಾರಿಕೆ ಅರಿತುಕೊಳ್ಳಿ!

ಬೆಂಗಳೂರು:

ಇಂದಿನ ಸಮಕಾಲೀನ ಸಂದರ್ಭದಲ್ಲಿ ಮಕ್ಕಳ ಮತ್ತು ಸಮುದಾಯದ ವಿಚಾರವಾಗಿ ಹಾಗೂ ಅವರ ಭವಿಷ್ಯದ ನಿಲುವಿಗಾಗಿ ಚಿಂತನೆ ಮಾಡುವ ವೇದಿಕೆಗಳು ಇಲ್ಲದಾಗಿದೆ. ಪ್ರಸಕ್ತ ತಳಮಟ್ಟದಲ್ಲಿ ನಾವು ಗಮನಿಸಿದಾಗ ಬಹಳ ಬೇಜಾರಿನ ಸಂಗತಿಗಳು ಹೊರಹೊಮ್ಮಿವೆ. ನಿಜಕ್ಕೂ ಕೆಂಪೇಗೌಡರ ಅಸ್ಮಿತೆಗಳನ್ನು ಕಾಪಾಡುವ ಪರಿ ಇದೇನಾ ಎಂಬ ಪ್ರಶ್ನಾರ್ಥಕ ಭಾವನೆಯನ್ನು ಇದು ಮೂಡಿಸಿದೆ.

ನಮ್ಮ ಒಕ್ಕಲಿಗರ ಸಮುದಾಯದ ಅನೇಕರು ಒಳ್ಳೆಯ ಜವಾಬ್ದಾರಿಗಳನ್ನು ವಹಿಸಿ ಸಮಾಜವನ್ನು ತಿದ್ದುತ್ತಿರುವುದು ಬಹಳ ಸಂತೋಷದ ವಿಷಯವಾದರೂ, ನಮ್ಮ ಸಮುದಾಯದ ವಿಚಾರವಾಗಿ ಸಮಾಜದಲ್ಲಿ ನೇರವಾಗಿ ಮಾತನಾಡಲು ಧೈರ್ಯ ಕಳೆದುಕೊಂಡಿರುವುದು ಬಹಳ ನೋವನ್ನು ಉಂಟುಮಾಡುವ ವಿಷಯವಾಗಿದೆ. ಇಂತಹ ವಿಚಾರಗಳನ್ನು ಕೆಲವರು ಸೂಕ್ಷ್ಮ ವಿಚಾರ ಎಂದು ಕೈಬಿಟ್ಟರೆ, ಇನ್ನು ಕೆಲವರು ಇದು ತಮ್ಮ ರಾಜಕೀಯ ಜೀವನಕ್ಕೆ ತೊಂದರೆ ಮಾಡಬಹುದು ಎಂದು ದೂರವಿಟ್ಟಿರುತ್ತಾರೆ. ಇನ್ನು ಕೆಲವರು, "ನಮ್ಮ ಸಮಾಜದಲ್ಲಿ ಯಾರೂ ಮುಂದೆ ಬರುವುದಿಲ್ಲ, ಎಲ್ಲರನ್ನು ಮುಂದೆ ಕಳುಹಿಸಿ ನಮ್ಮನ್ನು ಒಂಟಿ ಮಾಡುತ್ತಾರೆ" ಎಂಬ ಭಾವನೆಯಿಂದ ಕೈಬಿಟ್ಟಿರುತ್ತಾರೆ. ಇನ್ನು ಹಲವಾರು ಮಂದಿ "ಯಾರಾದರೂ ಬರುತ್ತಾರೆ, ಅವರೊಂದಿಗೆ ನಾವು ನಿಲ್ಲಬೇಕು ಮತ್ತು ಪ್ರಸಕ್ತ ನಮ್ಮತನವನ್ನು ಕಾಪಾಡಲೇಬೇಕು" ಎಂಬ ಆಶಯಗಳನ್ನು ಹೊತ್ತುಕೊಂಡು ಪ್ರಸಕ್ತ ಸ್ಥಿತಿವಂತ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ಹೊಂದಿರುವ ವ್ಯಕ್ತಿಗಳನ್ನು ಪ್ರೋತ್ಸಾಹಿಸಿ, ಆ ಆಶಯಗಳನ್ನು ಜೀವಂತವಾಗಿ ಇಟ್ಟುಕೊಳ್ಳುತ್ತಾರೆ.

'ಒಕ್ಕಲುತನ' ಮರೆತ ನಾಯಕತ್ವಕ್ಕೆ ಛೀಮಾರಿ

ನಿಜಕ್ಕೂ ನಾಚಿಕೆಯಾಗಬೇಕು ಇಂತಹ ಜನರಿಗೆ. ಏಕೆ ಈ ಮಾತನ್ನು ಹೇಳುತ್ತಿರುವೆ ಎಂದರೆ... ನಮ್ಮ ಸಂಪ್ರದಾಯ ಒಕ್ಕಲುತನ. ಒಂದು ವೇಳೆ ಒಕ್ಕಲುತನವೇ ಇಲ್ಲದಿದ್ದರೆ ಒಕ್ಕಲಿಗರು ಎಲ್ಲಿ ಇರುತ್ತಾರೆ? ಒಕ್ಕಲಿಗರು ಕ್ರಮೇಣ ಶಕ್ತಿಯನ್ನು ಕಳೆದುಕೊಳ್ಳಲು ಮತ್ತು ಅವರ ಮೂಲ ಸಂಪ್ರದಾಯಕ್ಕೆ ಗೌರವವನ್ನು ಕುಗ್ಗಿಸುವ ವಿಚಾರದಲ್ಲಿ ಕಾರಣೀಭೂತರು ಮತ್ತು ಅತಿ ಹೆಚ್ಚು ಪಾತ್ರ ವಹಿಸಿರುವವರು ಎಂದರೆ, ನಮ್ಮ ಸಮುದಾಯದಿಂದ ರಾಜಕೀಯ ಕ್ಷೇತ್ರದಲ್ಲಿ ಇಂದು ಅಧಿಕಾರ ವಹಿಸಿರುವವರು. ಕೇವಲ ಹಿಂದಿನ ಅವರ ಆರ್ಥಿಕ ವ್ಯವಸ್ಥೆಯಿಂದ ಗಮನಿಸಿದರೆ ಪ್ರಸಕ್ತ ತಲೆಮಾರುಗಳಿಗೆ ಆಗುವಷ್ಟು ಹಣವನ್ನು ಸಂಪಾದಿಸಿ, ಅಲ್ಲಿ ಇಲ್ಲಿ ಸ್ವಾಭಿಮಾನವನ್ನು ಬಿಟ್ಟು ಅನ್ಯ ಸಾಂಪ್ರದಾಯಿಕ ಜನರನ್ನು ಮೆಚ್ಚಿಸುವ ರೀತಿಯಲ್ಲಿ ಸಂಪ್ರದಾಯವನ್ನು ಮರೆತು, ಕೃತಕವಾಗಿ ನಮ್ಮ ಒಕ್ಕಲಿಗ ಜನರನ್ನು ನಂಬಿಸಲು, "ನಾವು ರಾಜಕೀಯವಾಗಿ ಒಕ್ಕಲಿಗರು ಎಂದು ಹೇಳಿಕೊಳ್ಳಲು ಕಷ್ಟ, ನೀವೆಲ್ಲ ಸಹಕರಿಸಿ ಇಂದಿನಿಂದ ನಮ್ಮ ಕೆಲಸವನ್ನು ಮಾಡಿಕೊಳ್ಳೋಣ" ಎಂದು ಹೇಳುತ್ತಾ ತೆರೆಮರೆಯಲ್ಲಿ ಸಮುದಾಯಕ್ಕೆ ನಾವಿದ್ದೇವೆ ಎಂದು ಹೇಳುತ್ತಾ ಮಾಡುತ್ತಿರುವ ವಿಚಾರ ಒಂದು ಕಡೆ.

ಮತ್ತೊಂದು ಕಡೆ, ಸಂಘದ ಹೆಸರುಗಳಲ್ಲಿ ಸಂಘವನ್ನು ಪ್ರತಿಷ್ಠಾಪಿಸಿ ಮೂಲ ಸಂಪ್ರದಾಯವನ್ನು ಮರೆತು ಕೇವಲ ವೇದಿಕೆಗಳಿಗೆ ಸೀಮಿತವಾಗಿರುವ ಅನರ್ಹ ನಾಯಕತ್ವಗಳನ್ನು ಪ್ರೋತ್ಸಾಹಿಸುತ್ತಾ ಮತ್ತು ಸಮಾಜದ ಮುಂದೆ ಸಾಂಪ್ರದಾಯಿಕ ಒಕ್ಕಲಿಗರನ್ನು ಇಕ್ಕಟ್ಟಿಗೆ ಸಿಲುಕಿಸಿ, "ಸಮಾಜದಲ್ಲಿ ನಮ್ಮ ಗೌರವ ಹೋಗುತ್ತದೆ, ತಪ್ಪುಗಳೆಲ್ಲವೂ ನಮ್ಮ ಚೌಕಟ್ಟಿನಲ್ಲೇ ಇರಲಿ" ಎಂದು ಹೇಳುತ್ತಲೇ ತಮ್ಮ ಬೇಳೆ ಬೇಯಿಸಿಕೊಂಡು, ಸಮುದಾಯದಲ್ಲಿ ಯಾರನ್ನೂ ಬೆಳೆಸದೆ, ಯುವಕರ ಆಶಯಗಳನ್ನು ಮುರಿದು, ಕೆಂಪೇಗೌಡ ಹೆಸರನ್ನೇ ಬಳಸಿಕೊಂಡು ಕೆಂಪೇಗೌಡರ ಕನಿಷ್ಠ ಮೌಲ್ಯಗಳನ್ನು ಅನುಸರಿಸದ ಕೆಲವರಿಂದ, ಕುಲಾಭಿಮಾನ ಇಲ್ಲದ ಅನರ್ಹರಿಂದ ನಮ್ಮ ಸಮುದಾಯಕ್ಕೆ ಬಹಳಷ್ಟು ನಷ್ಟವಾಗಿದೆ.

ಶಿಕ್ಷಣದ ಭರವಸೆ, ಉದ್ಯೋಗದ ಶೂನ್ಯ

ಮಾತು ಎತ್ತಿದರೆ ಸಾಕು, "ನಮ್ಮ ಯುವಕರ ಭವಿಷ್ಯ ವಿದ್ಯಾಭ್ಯಾಸದಲ್ಲಿದೆ" ಎಂದು ಹೇಳುತ್ತಾ ಮೀಸಲಾತಿ ಕೂಡ ನಮಗೆ ಬೇಕು ಎಂದು ಹೋರಾಟ ಮಾಡುವ ಮಾತುಗಳನ್ನು ಆಡಿಕೊಂಡು ಪದೇಪದೇ ಇದೇ ವಿಚಾರಗಳನ್ನು ಹೇಳಿಕೊಂಡು, ಚುನಾವಣೆಯಲ್ಲಿ ತಾವು ಮತ್ತು ತಮ್ಮ ಮಕ್ಕಳು ಗೆಲ್ಲುವುದು ಅಲ್ಲದೆ, ಸ್ವಾಭಿಮಾನ ಇರುವವರನ್ನು ತುಳಿದು ಹಾಕಿ ಅವರಿಗೆ ಅನುಕೂಲ ಮಾಡುವ ಸ್ವಾಭಿಮಾನ ರಹಿತ ಅನರ್ಹರನ್ನು ಗೆಲ್ಲಿಸಿಕೊಂಡು, ಚುಕ್ಕಾಣಿಯ ಆಸೆಗಾಗಿ ಬಲಿಷ್ಠವಾಗಿ ತಮ್ಮನ್ನು ಇಲ್ಲಿಯವರೆಗೆ ಆಶೀರ್ವದಿಸಿದ ಸಂಪ್ರದಾಯದ ಬುಡವನ್ನೇ ಬೆಂಕಿ ಇಟ್ಟು ನಾಶ ಮಾಡಲು ಹೊರಟಿರುವ ಚಾಂಡಾಲರು, ಪ್ರಸಕ್ತ ವಿದ್ಯಾಭ್ಯಾಸ ಆದನಂತರ ಉದ್ಯೋಗಕ್ಕೆ ಅವಕಾಶಗಳೇ ಇಲ್ಲ ಎಂಬುವ ವಾಸ್ತವವನ್ನು ತಿಳಿದಿದ್ದರೂ ಸಹ, ನಮ್ಮನೆಲ್ಲ ಕಾಪಾಡುತ್ತಾ ಬಂದಿರುವ ಒಕ್ಕಲುತನದ ವಿಚಾರವಾಗಿ ಇಲ್ಲಿಯವರೆಗೆ ಯಾವುದೇ ರೀತಿಯ ಗಮನ ಕೊಡದೆ ಇರುವ ಇಂತಹವರಿಂದ, ಒಕ್ಕಲುತನದ ಆಶ್ರಿತರನ್ನು ಸಹ ಒಕ್ಕಲುತನವನ್ನು ಬಿಟ್ಟುಬಿಡುವಂತೆ ಮಾಡಿ, ಅವರ ಭರವಸೆಗಳ ಮೇಲೆ ತಣ್ಣೀರು ಹಾಕಿ, ಮುಂಬರುವ ದಿನಗಳಲ್ಲಿ ಬೆಳೆಯುವ ಒಕ್ಕಲುತನದ ರೈತನೇ ಇರುವುದಿಲ್ಲ ಎಂಬ ಭೀತಿ ಇದೆ. ಎಲ್ಲರೂ ಸಂಪ್ರದಾಯಗಳ ಶಕ್ತಿಯನ್ನು ಮರೆತು, ಒಂದೊಂದು ದಿನ ತಮ್ಮ ಮಕ್ಕಳನ್ನು ಹಣವಂತ ಮತ್ತು ರಾಜಕೀಯ ಪ್ರೇರಿತ ಕುಟುಂಬಗಳಿಗೆ ಅಡಿ ಆಳುಗಳನ್ನಾಗಿ ಮಾಡುವ ಷಡ್ಯಂತ್ರ ನಡೆಯುತ್ತಿದೆ ಎಂಬ ಅಪಾರವಾದ ಅನುಮಾನ ಎಲ್ಲರಲ್ಲೂ ಮೂಡುತ್ತಿದೆ.

ಒಂದು ಕಡೆ, ತಲೆಮಾರುಗಳಿಂದ ಇಲ್ಲಿಯವರೆಗೆ ಕೃಷಿಯನ್ನು ಹುಟ್ಟಿನಿಂದಲೇ ಹೇಳಿಕೊಟ್ಟು ಜೀವನ ಕಟ್ಟಿಕೊಡುವ ರೈತರು ಒಂದು ಕಡೆಯಾದರೆ, ಹಣಕ್ಕಾಗಿ ಇದೇ ಕೃಷಿಯನ್ನು 'ಅಗ್ರಿಕಲ್ಚರ್ ಬಿಎಸ್‌ಸಿ ಯೂನಿವರ್ಸಿಟಿಗಳು' ಎಂಬ ವ್ಯಾಪಾರೀಕರಣದ ವಿಶ್ವವಿದ್ಯಾಲಯಗಳನ್ನು ತೆರೆದು, ನಿಜವಾದ ಒಕ್ಕಲುತನದ ರೈತರನ್ನು ಸಮಾಜದಲ್ಲಿ 'ಒಳ್ಳೆಯ ಗೌರವ' ಎಂಬ ಬಣ್ಣಬಣ್ಣದ ಕಾಗದಗಳಿಗೆ ಮಾರಿ ಹೋಗುವಂತೆ ಮಾಡಿ, ಮೂಲ ಸಂಪ್ರದಾಯವನ್ನು ಸಹ ಹಾಳು ಮಾಡುತ್ತಿದ್ದಾರೆ.

ಐಕ್ಯತೆ ಮತ್ತು ಜವಾಬ್ದಾರಿಯ ತುರ್ತು

ನಿಜವಾದ ಒಕ್ಕಲಿಗ ಶ್ರೇಷ್ಠತೆ ಎಂದರೆ ನಮ್ಮ ಒಕ್ಕಲುತನದ ಸಂಪ್ರದಾಯ. ನಮ್ಮೆಲ್ಲ ಒಳಪಂಗಡಗಳ ಶಕ್ತಿ ಸಾಂಪ್ರದಾಯಿಕ ವ್ಯವಸ್ಥೆಯಲ್ಲಿದೆ. ಅದರ ಅರಿವು ಇಂದಿನ ಎಲ್ಲಾ ಸ್ವಾಮೀಜಿಗಳಿಗೂ ಬೇಕು ಮತ್ತು ಎಲ್ಲಾ ಪ್ರಸಕ್ತ ರಾಜಕೀಯ ವ್ಯವಸ್ಥೆಯಲ್ಲಿ ಸಮುದಾಯವನ್ನು ದಶಕಗಳಿಂದ ಬಳಸಿಕೊಂಡು ಇಂದು ಸದೃಢರಾಗಿರುವ ಎಲ್ಲರಿಗೂ ಬೇಕು. ತಳಮಟ್ಟದಲ್ಲಿನ ಒಕ್ಕಲಿಗರಿಗೆ, ನಾವು ಮೂಲತಃ ಒಕ್ಕಲಿಗರು ಎಂದು ಹೇಳಿಕೊಳ್ಳಲು ಇಂದಿಗೂ ಸಂಪ್ರದಾಯಿಕ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಕಾಪಾಡುತ್ತಾ, ರಾಜಕೀಯ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲರನ್ನು ಬೆಂಬಲಿಸುತ್ತಾ, ಸಮುದಾಯದ ಬೆಂಗಾವಲು ಆಗಿರುವ ರೈತರು ಇಂದು ಯಾವುದೇ ರಕ್ಷಣೆ ಇಲ್ಲದೆ, ಯಾವುದೇ ಸಹಾಯ ಇಲ್ಲದೆ ಇಲ್ಲಿಯವರೆಗೂ ದುಡಿದು, ಸಮುದಾಯಕ್ಕಾಗಿಯೇ ಸ್ವಾಭಿಮಾನ ಎಂಬ ನಿಜವಾದ ಆತ್ಮಸಾಕ್ಷಿಯನ್ನು ತುಂಬಿಕೊಂಡು, ಈಗಲೂ ಸಹ ಆಶಯಗಳನ್ನು ಹೊತ್ತುಕೊಂಡು ಕಾಯುತ್ತಿದ್ದಾರೆ.

ಇನ್ನಾದರೂ ಎಲ್ಲಾ ಒಕ್ಕಲಿಗ ಕುಲಬಾಂದವರು ವಾಸ್ತವವನ್ನು ಅರಿತು, ಒಳ ಪಂಗಡಗಳ ಐಕ್ಯತೆಯನ್ನು ಎತ್ತಿ ಹಿಡಿಯುತ್ತಾ, ರಾಜಕೀಯ ಮತ್ತು ಇತರೆ ಎಲ್ಲಾ ವೇದಿಕೆಗಳ ಆಸೆಗಳು ಮತ್ತು ಕಾಮನೆಗಳನ್ನು ಮರೆತು ಒಂದಾಗಿ ನಮ್ಮ ಮೂಲವನ್ನು ಸುಭದ್ರ ಮಾಡಬೇಕು. ಇಲ್ಲದಿದ್ದರೆ ನಮ್ಮ ಮುಂದಿನ ಮಕ್ಕಳ ಭವಿಷ್ಯ ಆತಂತ್ರವಾಗುತ್ತದೆ. ಹಾಗೂ ಇಂದು ಸಮುದಾಯದಲ್ಲಿ ಶ್ರೀಮಂತರಾಗಿರುವ ರಾಜಕೀಯ ನಾಯಕರೇ ಇರಲಿ ಅಥವಾ ಜ್ಞಾನವಂತ ಮಠಾಧೀಶರೇ ಆಗಿರಲಿ, ನಾಳೆ ನಿಮ್ಮನ್ನು ಕಾಪಾಡಲು ಯಾರೂ ಇರುವುದಿಲ್ಲ. ಹಾಗೂ ಸಮುದಾಯಕ್ಕಿಂತ ದೊಡ್ಡವರು ಯಾರೂ ಇಲ್ಲ ಎಂಬ ಭಾವನೆಯನ್ನು ಎಲ್ಲಿ ನಾವೆಲ್ಲರೂ ಮರೆಯುತ್ತೇವೆ, ಅಲ್ಲಿಂದಲೇ ನಮ್ಮ ಅವನತಿ ಪ್ರಾರಂಭವಾಗುತ್ತದೆ ಎಂಬುದು ಸತ್ಯ..

ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ನಾವು ಜಾಗೃತರಾಗಬೇಕು. ಪರಸ್ಪರ ವೈಯಕ್ತಿಕ ವಿಷಯಗಳನ್ನು ಮರೆತು ಇನ್ನಾದರೂ ಸಮುದಾಯಕ್ಕಾಗಿ ಒಂದಿಷ್ಟು ಸಮಯವನ್ನು ಕೊಡಬೇಕು. ರಾಜಕೀಯದಲ್ಲಿ ಇರುವ ನಾಯಕರು ಇನ್ನಾದರೂ ನಮ್ಮ ಸಮುದಾಯದ ಹೊಸ ನಾಯಕತ್ವವನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಬೇಕು. ರಾಜಕೀಯದಲ್ಲಿರುವ 'ಕುಟುಂಬ ರಾಜಕಾರಣ' ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವ ಸಮುದಾಯದ ಅನೇಕರು ಈ ಕೂಡಲೇ ತಳಮಟ್ಟದ ಒಕ್ಕಲುತನದ ಶಕ್ತಿಯನ್ನು ಹೆಚ್ಚಿಸಬೇಕು ಮತ್ತು "ರಾಜಕೀಯಕ್ಕಿಂತ ಸಮುದಾಯದ ಶಕ್ತಿಯೇ ದೊಡ್ಡದು" ಎಂಬ ಭಾವನೆಯನ್ನು ಎದೆ ಮುಟ್ಟಿ ಮಾತನಾಡುವಂತ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು.

ಮಠಾಧೀಶರುಗಳು ಸಮುದಾಯದ ಭರವಸೆಗಾಗಿ ಇನ್ನಾದರೂ ಪ್ರತಿ ವೇದಿಕೆಗಳಲ್ಲಿ ಒಕ್ಕಲಿಗ ಸಮುದಾಯವನ್ನು ಹುರಿದುಂಬಿಸಬೇಕು ಮತ್ತು ತಮ್ಮ ವ್ಯಾಪ್ತಿಯಲ್ಲಿ ಎಲ್ಲರಿಗೂ ಅರ್ಥ ಮಾಡಿಸಿ, ಒಕ್ಕಲಿಗರ ಒಕ್ಕಲುತನದ ಅವಶ್ಯಕತೆ ಮುಂಬರುವ ಸಮಾಜಕ್ಕೆ ಎಷ್ಟಿದೆ ಎಂಬುದನ್ನು ಅರ್ಥ ಮಾಡಿಸಿ, ಪ್ರತಿಯೊಬ್ಬ ರೈತನಿಗೂ ಸಮಾಜದಲ್ಲಿ ಗೌರವ ಸಿಗುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಮತ್ತು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು.

ಈಗಾಗಲೇ ಸಮಯವಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಸಮುದಾಯ ಅಷ್ಟೇ ಅಲ್ಲ, ನಾವು ನೀವೆಲ್ಲರೂ ಬಹಳ ಬೇಗನೆ ನಮ್ಮ ಮೂಲ ಅಸ್ಮಿತೆಗಳನ್ನು ಕಳೆದುಕೊಳ್ಳುತ್ತೇವೆ.

ಜೈ ಕೆಂಪೇಗೌಡ