ಒಕ್ಕಲಿಗ ಸಮುದಾಯದ ಐಕ್ಯತೆ ಮತ್ತು ಸಾಂಪ್ರದಾಯಿಕ ಶಕ್ತಿಯ ಮಹತ್ವ
ಒಕ್ಕಲಿಗ ಸಮುದಾಯದ ಐಕ್ಯತೆ ಮತ್ತು ಸಾಂಪ್ರದಾಯಿಕ ಶಕ್ತಿಯ ಮಹತ್ವವನ್ನು ಅರಿತು, ನಮ್ಮ ಸಮುದಾಯದ ಭವಿಷ್ಯವನ್ನು ರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ನಾವು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ.
VOKKALIGA COMMUNITY DEVELOPMENT AND UNITY FORMATION IN ACTION
Sri Antharagangadharanatha Swamiji
9/30/20241 min read


ಒಕ್ಕಲಿಗ ಸಮುದಾಯದ ಐಕ್ಯತೆ ಮತ್ತು ಸಾಂಪ್ರದಾಯಿಕ ಶಕ್ತಿಯ ಮಹತ್ವ
ಒಕ್ಕಲಿಗ ಸಮುದಾಯದಲ್ಲಿ ಹಲವು ವರ್ಷಗಳಿಂದ ನಾಯಕರಾಗಿ ಇರುವವರು, ಸಮುದಾಯದ ಶಕ್ತಿಯನ್ನು ಬಳಸಿಕೊಂಡು, ಯುವಕರ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ. ರಾಜಕೀಯ ಪಕ್ಷ ಬೇಧಗಳನ್ನು ಮರೆತು, ಸಾಮರಸ್ಯಕ್ಕೆ ಬೆಲೆ ಕೊಟ್ಟು, ಸಮುದಾಯದ ಗೌರವ ಮತ್ತು ಸಾಂಪ್ರದಾಯಿಕ ಹಿನ್ನೆಲೆಯನ್ನು ಕಡೆಗಣಿಸದೆ, ವೈಯಕ್ತಿಕ ಲಾಭಗಳಿಗೆ ತುತ್ತಾಗಬಾರದು.
ಸಮುದಾಯದ ಶಕ್ತಿಯ ಬಳಕೆ
ಒಕ್ಕಲಿಗರು ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯಾಬಲವಿದ್ದರೂ, ರಾಜಕೀಯ ಸ್ಥಿರತೆ ಮತ್ತು ಪ್ರಾಂತ್ಯಾವಾರು ಒಕ್ಕಲಿಗರ ಮಾತಿಗೆ ಬೆಲೆ ಇಲ್ಲದಂತೆ ಆಗಿರುವುದನ್ನು ಯೋಚಿಸಲೇಬೇಕು. ಬಹು ಪಾಲು ಒಕ್ಕಲಿಗರು ಸಮಾಜವನ್ನು ಸಾಮರಸ್ಯ ಭಾವನೆಯಿಂದ ನೋಡುತ್ತಾರೆ ಹೊರತು ಜಾತಿವಾದಿಗಳಂತೂ ಅಲ್ಲ. ನಮ್ಮ ನಾಡಪ್ರಭು ಶ್ರೀ ಕೆಂಪೇಗೌಡರ ಜೀವನ ಚರಿತ್ರೆ ಮತ್ತು ಅವರು ಸಮಾಜಕ್ಕೆ ಕೊಟ್ಟ ಮರೆಯಲಾಗದ ಬಳುವಳಿಗಳು ಇದಕ್ಕೆ ನಿದರ್ಶನ.
ಸಮುದಾಯದ ಐಕ್ಯತೆ
ಪ್ರಸಕ್ತ ಕಾಲಮಾನದಲ್ಲಿ ಕೆಲವು ಸ್ವಾರ್ಥಿ ಮತ್ತು ಸಮುದಾಯದ ಕುಲದ್ರೋಹಿಗಳು ರಾಜಕೀಯ ಲಾಭಕ್ಕಾಗಿ ತಮ್ಮ ಸ್ವಾಭಿಮಾನವನ್ನು ಮರೆತು, ಸಾಂಪ್ರದಾಯಿಕ ಹಿರಿಮೆಯನ್ನು ಬದಿಗಿಟ್ಟು, ನಮ್ಮ ಸಮುದಾಯದ ಐಕ್ಯತೆಯನ್ನು ಹೊಡೆದು ಆಳುವ ನೀತಿ ಹೆಚ್ಚಾಗಿದೆ. ಇದಕ್ಕೆ ಮೂಲ ಕಾರಣವೆಂದರೆ, ಒಕ್ಕಲಿಗರಲ್ಲಿ ಕೆಲವು ಪ್ರಮುಖ ತಿಳುವಳಿಕೆ ಬರದೇ ಇರುವುದು.
ಐಕ್ಯತೆಯ ಮಹತ್ವ
ಒಕ್ಕಲುತನದ ಒಳಪಂಗಡಗಳ ಐಕ್ಯತೆಯ ವಿಚಾರವಾಗಿ ನಾವು ಸಂಕಲ್ಪ ತೊಟ್ಟು ಒಂದು ಹೆಜ್ಜೆ ಮುಂದಿಟ್ಟರೆ, ಪ್ರತಿಯೊಬ್ಬರು ಕನಿಷ್ಠ 10 ರೂಪಾಯಿ ದೇಣಿಗೆ ಕೊಟ್ಟು ಸಂಗಟಿತರಾದರೆ, ನಮ್ಮ ಮುಂದೆ ಯಾವ ಶ್ರೀಮಂತಿಕೆಯು ನಡೆಯುವುದಿಲ್ಲ. ಬದಲಿಗೆ, ಇಂದಿನ ವಿಪರ್ಯಾಸ ಎಂದರೆ, ನಮ್ಮನ್ನು ಬಳಸಿಕೊಳ್ಳಲು ಸಮುದಾಯ ಮತ್ತು ಸ್ವಾಭಿಮಾನದ ಮಾತುಗಳನ್ನು ಆಡುವ ಕುಲದ್ರೋಹಿಗಳು ತಮ್ಮ ಹಣಬಲದಿಂದ ಸ್ವಾಭಿಮಾನಿ ಮತ್ತು ನಿಷ್ಪಕ್ಷಪಾತಿ ಸಮುದಾಯದ ಒಳಿತಿಗೆ ದುಡಿಯುವ ಜನರನ್ನು ಬಿಟ್ಟು, ಅನ್ಯ ರೀತಿಯ ಲಾಭಗಳಿಗಾಗಿ ನಮ್ಮವರನ್ನು ತುಳಿಯುವುದೇ ಅಲ್ಲದೆ ಬಳಸಿಕೊಂಡು ದೂರ ಇಡುವ ಅಭ್ಯಾಸವನ್ನು ನಡೆಸುತ್ತಿದ್ದಾರೆ.
ಸಮುದಾಯದ ಸಾಂಪ್ರದಾಯಿಕ ಶಕ್ತಿ
ಸಮುದಾಯದ ಸಾಂಪ್ರದಾಯಿಕ ಹಿನ್ನೆಲೆಯನ್ನು ಅರಿತು, ಮೊದಲಿಗೆ ಒಳಪಂಗಡಗಳ ಐಕ್ಯತೆಯನ್ನು ನಾವು ಎತ್ತಿ ಹಿಡಿದು, ನಾವೆಲ್ಲರೂ ಒಕ್ಕಲಿಗರು ಒಂದಾಗಿ, ಪ್ರಥಮವಾಗಿ ಹಳ್ಳಿಗಳಲ್ಲಿ ಎಲ್ಲಾ ಜಾತಿಯ ಸಂಪ್ರದಾಯಗಳನ್ನು ತೆಗೆದುಕೊಂಡು, ಸಾಮರಸ್ಯವನ್ನು ಕಟ್ಟಿ, ರಾಷ್ಟ್ರೀಯ ಐಕ್ಯತೆಗೆ ಮಾದರಿ ವ್ಯವಸ್ಥೆಯನ್ನು ಮಾಡಿದಾಗ, ಮತ್ತೊಮ್ಮೆ ನಮ್ಮ ಒಕ್ಕಲಿಗರ ಸ್ವಾಭಿಮಾನಿ ಕೀರ್ತಿ ಪತಾಕೆ ರಾಷ್ಟ್ರಾದ್ಯಂತ ಹಾರಾಡುವುದರಲ್ಲಿ ಸಂಶಯವೇ ಇಲ್ಲ.
ಸಮುದಾಯದ ಭವಿಷ್ಯ
ನಿಮ್ಮ ಹಳ್ಳಿಯ ಅಥವಾ ಊರಿನ ಯಾರೇ ಇರಲಿ, ಅವರು ಎಷ್ಟೇ ಶ್ರೀಮಂತರಾಗಲಿ, ಸಮುದಾಯದ ಕನಿಷ್ಠ ಮರ್ಯಾದೆಯನ್ನು ಕಾಪಾಡುವ ಲಕ್ಷಣಗಳು ಅವರಲ್ಲಿ ಕಂಡು ಬರದಿದ್ದರೆ, ಅಂತವರನ್ನು ರಾಜಕೀಯ ವ್ಯವಸ್ಥೆಯಿಂದ ತೆಗೆದು ಹಾಕಿ. ಅಂತವರನ್ನು ರಾಜಕೀಯವಾಗಿ ಎಲ್ಲಿಯೂ ಬೆಳೆಸಬೇಡಿ. ಇಂದು ನೀವು ಅವರು ಕೊಡುವ ಎಂಜಲು ಕಾಸಿಗೆ ಮರ್ಯಾದೆ ಕೊಟ್ಟು ಸಾಂಪ್ರದಾಯಿಕ ಗೌರವವನ್ನು ಮರೆತರೆ, ಅವರು ಮುಂದೆ ನಿಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡುವ ರಾಕ್ಷಸರಾಗಿ ನಿಮ್ಮ ವಂಶವನ್ನೇ ನಿರ್ವಂಶ ಮಾಡುತ್ತಾರೆ.
ಸಮುದಾಯದ ಸಂಸ್ಕೃತಿ ಮತ್ತು ಸಂಪ್ರದಾಯ
ಒಂದು ದೇಶ ಹಾಳಾಗಬೇಕಾದರೆ ಅದರ ಸಂಸ್ಕಾರ ಸಂಸ್ಕೃತಿಯನ್ನು ಕೆಡವಿದರೆ ಸಾಕು, ಎಂದು ಹಿಂದೆ ಹೇಳುತ್ತಿದ್ದರು. ಇದನ್ನೇ ಇಂದು ನಮ್ಮ ಬಲಿಷ್ಠ ಒಕ್ಕಲಿಗರ ಐಕ್ಯತೆಯ ಹಾಗೂ ಸಂಪ್ರದಾಯಿಕ ಶಕ್ತಿಗೆ ವಿರುದ್ಧವಾಗಿ ಮಾರಕ ಅಸ್ತ್ರದಂತೆ ಉಪಯೋಗಿಸುತ್ತಿರುವ ಹೊರಗಿನವರು, ನಮ್ಮಲ್ಲಿನ ಜ್ಞಾನವಿಲ್ಲದ ದುಷ್ಟರನ್ನು ಬೆಳೆಸಿ, ವೈಯಕ್ತಿಕವಾಗಿ ಸಮುದಾಯವನ್ನು ಹಾಳು ಮಾಡುತ್ತಿದ್ದಾರೆ. ಇದನ್ನು ಇನ್ನಾದರೂ ನಾವು ಜಾಗೃತರಾಗಿ ಅರಿಯಬೇಕು ಎಂಬುದನ್ನು ಎಂದಿಗೂ ಮರೆಯದಿರಿ.
ಒಕ್ಕಲಿಗ ಸಮುದಾಯದ ಐಕ್ಯತೆ ಮತ್ತು ಸಾಂಪ್ರದಾಯಿಕ ಶಕ್ತಿಯ ಮಹತ್ವವನ್ನು ಅರಿತು, ನಮ್ಮ ಸಮುದಾಯದ ಭವಿಷ್ಯವನ್ನು ರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ನಾವು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ.
|| ಜೈ ಶ್ರೀ ಗುರುದೇವ ||