ವಿಶೇಷ ಲೇಖನ: ಸಮುದಾಯದ ಅಳಿವು-ಉಳಿವು ಮತ್ತು ಶ್ರೀಮಠದ ಪವಿತ್ರ ಜವಾಬ್ದಾರಿ

ಪರಮಪೂಜ್ಯ ಭೈರವೈಕ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಶಕ್ತಿಯಿಂದ ಪ್ರಸಕ್ತ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಶ್ರೀಮಠ ಅಂದರೆ ನಮ್ಮ ಬಿಜಿಎಸ್ ಮಠ. ಸ್ವಾಮೀಜಿರವರು ಭೈರವೈಕ್ಯರಾದ ನಂತರ ಹಂತ ಹಂತವಾಗಿ ಸ್ವಾಮೀಜಿರವರ ಪರಿಕಲ್ಪನೆಯ ಮತ್ತು ಅವರ ಆಶಯಗಳಲ್ಲಿ ಪ್ರಮುಖವಾದ ಒಳಪಂಗಡಗಳ ಐಕ್ಯತೆ ಅಂದರೆ ಒಕ್ಕಲಿಗರ ಒಳಪಂಗಡಗಳ ಐಕ್ಯತೆ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಒಕ್ಕಲಿಗರ ಮಕ್ಕಳಿಗೆ ಪೂರಕವಾದ ವಿದ್ಯಾ ವ್ಯವಸ್ಥೆ ಮತ್ತು ಭವಿಷ್ಯಕ್ಕೆ ಅನುಕೂಲವಾಗುವ ಚಟುವಟಿಕೆಗಳು ಇವೆಲ್ಲವೂ ಕ್ರಮೇಣವಾಗಿ ಕಳೆಗುಂದುತ್ತಾ ಬರುತ್ತಿದೆ.

VOKKALIGA COMMUNITY DEVELOPMENT AND UNITY FORMATION IN ACTION

Rohann kumar K

12/22/20251 min read

ವಿಶೇಷ ಲೇಖನ: ಸಮುದಾಯದ ಅಳಿವು-ಉಳಿವು ಮತ್ತು ಶ್ರೀಮಠದ ಪವಿತ್ರ ಜವಾಬ್ದಾರಿ

ದಿನಾಂಕ: 23 ಡಿಸೆಂಬರ್, 2025

ಪರಮಪೂಜ್ಯ ಭೈರವೈಕ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಶಕ್ತಿಯಿಂದ ಪ್ರಸಕ್ತ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಶ್ರೀಮಠ ಅಂದರೆ ನಮ್ಮ ಬಿಜಿಎಸ್ ಮಠ. ಸ್ವಾಮೀಜಿರವರು ಭೈರವೈಕ್ಯರಾದ ನಂತರ ಹಂತ ಹಂತವಾಗಿ ಸ್ವಾಮೀಜಿರವರ ಪರಿಕಲ್ಪನೆಯ ಮತ್ತು ಅವರ ಆಶಯಗಳಲ್ಲಿ ಪ್ರಮುಖವಾದ ಒಳಪಂಗಡಗಳ ಐಕ್ಯತೆ ಅಂದರೆ ಒಕ್ಕಲಿಗರ ಒಳಪಂಗಡಗಳ ಐಕ್ಯತೆ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಒಕ್ಕಲಿಗರ ಮಕ್ಕಳಿಗೆ ಪೂರಕವಾದ ವಿದ್ಯಾ ವ್ಯವಸ್ಥೆ ಮತ್ತು ಭವಿಷ್ಯಕ್ಕೆ ಅನುಕೂಲವಾಗುವ ಚಟುವಟಿಕೆಗಳು ಇವೆಲ್ಲವೂ ಕ್ರಮೇಣವಾಗಿ ಕಳೆಗುಂದುತ್ತಾ ಬರುತ್ತಿದೆ.

ಕಟು ವಾಸ್ತವದ ಅವಲೋಕನ:

ಪ್ರಸಕ್ತ ಒಳಪಂಗಡಗಳ ಐಕ್ಯತೆಗೆ ಯಾವುದೇ ರೀತಿಯ ಕಣ್ಣಿಗೆ ಕಾಣುವಂತಹ ಚಟುವಟಿಕೆಗಳು ನಡೆಯುತ್ತಿಲ್ಲ. ಇದನ್ನು ಹೇಳಲು ಬೇಸರವಾದರೂ ಇದು ಸತ್ಯ ಮತ್ತು ಒಂದು ವೇಳೆ ಇದು ಸತ್ಯಕ್ಕೆ ದೂರವಾದರೆ ಸತ್ಯವನ್ನು ಸಮುದಾಯದ ಕುಲಬಾಂಧವರಿಗೆ ತಲುಪಿಸುವಲ್ಲಿ ಎಲ್ಲೋ ಲೋಪವಾಗಿದೆ ಎಂಬುದು ಬೇಜಾರಿನ ಸಂಗತಿ. ಇಂದಿನ ಪ್ರಸಕ್ತ ಇರುವ ಎಲ್ಲಾ ಒಕ್ಕಲಿಗರ ಸಂಸ್ಥಾನಿಕ ಮತ್ತು ಹಿನ್ನೆಲೆಯ ಮಠಗಳು ತಮ್ಮ ಮೂಲಭೂತ ಚೈತನ್ಯದ ಶಕ್ತಿಯಾಗಿ ಸದಾಕಾಲ ಒಕ್ಕಲುತನದಲ್ಲಿ ತೊಡಗಿರುವ ಆರ್ಥಿಕವಾಗಿ ಹಿಂದುಳಿದಿರುವ ಒಕ್ಕಲಿಗ ಸಮುದಾಯದ ಮಕ್ಕಳಿಗಾಗಿ ಮತ್ತು ಸಮಾಜದಲ್ಲಿ ಸಮಗ್ರ ಒಕ್ಕಲಿಗರ ಬಲವರ್ಧನೆಗಾಗಿ ಪ್ರಮುಖವಾದಂತಹ ಒಕ್ಕಲಿಗರ ಒಳ ಪಂಗಡಗಳ ಐಕ್ಯತೆಯ ಜವಾಬ್ದಾರಿಯನ್ನು ವಹಿಸುವುದು ಬಹಳ ಪ್ರಮುಖ ಮತ್ತು ಅವಶ್ಯಕತೆಯಾಗಿದೆ.

ರಾಜಕೀಯ ನಾಯಕತ್ವದ ವೈಫಲ್ಯ:

ಪಕ್ಷಗಳ ಧೀಮಂತ ನಾಯಕರು ಈಗಾಗಲೇ ಸಮುದಾಯದ ಐಕ್ಯತೆಯ ಶಕ್ತಿಯಿಂದ ಹೊರಹೊಮ್ಮಿರುವ ಹಿರಿಯ ಮತ್ತು ಧೀಮಂತ ರಾಜಕಾರಣಿಗಳು ಎಂದು ಎಣಿಸಿಕೊಂಡು ಜನರು ಅತಿ ಹೆಚ್ಚು ಸಂಖ್ಯೆಯಲ್ಲಿ ಅಪ್ರೋಚಕರಾಗಿ ಸಮುದಾಯಕ್ಕೆ ಯಾವುದೇ ರೀತಿಯ ಭರವಸೆ ನೀಡುವಲ್ಲಿ ಶೂನ್ಯ ಸಂಪಾದನೆ ಮಾಡಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸ್ವಾಮೀಜಿರವರು ಮತ್ತು ಮಠದ ಯಾವುದೇ ಚಟುವಟಿಕೆಗಳು ಸಮುದಾಯಕ್ಕೆ ಮತ್ತು ಸಮಾಜಕ್ಕೆ ಮಾದರಿಯಾಗಿ ಇರಬೇಕು. ಅವುಗಳನ್ನು ವಿಮರ್ಶಿಸುವ ನಿಟ್ಟಿನಲ್ಲಿ ಇಂದಿನ ಸಂಚಿಕೆ ಮುಂದುವರೆಯುತ್ತದೆ.

ಸರಳತೆ ಮತ್ತು ಸಮಾನತೆಯ ನಡಿಗೆ:

ಮೊದಲನೆಯದಾಗಿ ಪೀಠದ ಸ್ವಾಮೀಜಿರವರು ಬಹಳ ಸರಳತೆಯಿಂದ ಎಲ್ಲರನ್ನು ಸಮನಾಗಿ ಕಾಣುವ ನಡೆ ಮತ್ತು ಸಮುದಾಯದ ಹಿತಕ್ಕಾಗಿ ಕುಲಬಾಂಧವರಿಗೆ ಕಾಣಿಸುವಂತೆ ಅರ್ಥವಾಗುವಂತೆ ನಡೆಸಿಕೊಳ್ಳಬೇಕು. ಈ ಮಾತು ಏಕೆ ಹೇಳುತ್ತೇವೆ ಎಂದರೆ ಪೂಜ್ಯಶ್ರೀಗಳು ಧೀಮಂತ ಮಠವೆಂದು ಸಮಾಜಕ್ಕೆ ತೋರಿಸಿಕೊಡಲು ಅಂತರಾಷ್ಟ್ರೀಯ ಗುಣಮಟ್ಟದ ಬಹಳ ನೆಮ್ಮದಿಯನ್ನು ನೀಡುವ ಮತ್ತು ಸುಖವನ್ನು ತುಂಬುವ ವಾಹನಗಳನ್ನು ಬಳಸುವುದನ್ನು ಮಟಕುಗೊಳಿಸಬೇಕು ಮತ್ತು ಭಾರತ ದೇಶದ ಉಪ್ಪಿನ ಶಕ್ತಿಯಿಂದ ಹೊರಹೊಮ್ಮಿರುವ ಭಾರತದಲ್ಲಿ ತಯಾರಾದ ಭಾರತದ ಮೂಲ ಸಂಸ್ಥೆಯಾದ ವಾಹನ ಸಂಬಂಧಿತ ವಾಹನಗಳನ್ನು ಬಳಸಬೇಕು.

ಆಡಂಬರದ ಮರೆಯಲ್ಲಿ ಕಳೆದುಹೋಗದಿರಲಿ ಭಕ್ತರ ಅಳಲು:

ಈಗಾಗಲೇ ಸ್ವಾಮೀಜಿಗಳು ಯಾವುದೇ ಜಿಲ್ಲೆಗೆ ಯಾವುದೇ ತಾಲೂಕುಗಳಿಗೆ ಅಥವಾ ಕೆಂಪೇಗೌಡರ ಬೆಂಗಳೂರಿನ ಯಾವುದೇ ಕಾರ್ಯಕ್ರಮಗಳಿಗೆ ಬಂದರೆ ವಿಪರ್ಯಾಸ ಎಂದರೆ ಅತಿ ಹೆಚ್ಚು ದೊಡ್ಡ ದೊಡ್ಡ ಕಾರುಗಳಲ್ಲಿ ಬಂದು ಹೆಚ್ಚು ಒಡವೆಗಳನ್ನು ಹಾಕಿಕೊಂಡು ಶ್ರೀಮಂತಿಕೆಯನ್ನು ತೋರ್ಪಡಿಸುವ ಮಂದಿಯೇ ಅವರನ್ನು ಸುತ್ತುವರಿದಿರುತ್ತಾರೆ ಮತ್ತು ಪೂಜ್ಯಶ್ರೀಗಳು ಕೂಡ ಅವರೊಡನೆ ಮಾತನಾಡುವ ಅನಿವಾರ್ಯತೆ ಬಂದುಬಿಡುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಅಥವಾ ಸಮಾಜದಲ್ಲಿ ಒತ್ತಡಕ್ಕೆ ಸಿಲುಕಿರುವ ಮಠದ ಭಕ್ತಾದಿಗಳು ಇರುತ್ತಾರೆ ಎಂಬುದನ್ನು ಅರಿತುಕೊಂಡು ಪೂಜ್ಯಶ್ರೀಗಳು ಹೆಚ್ಚು ಸಮಯವನ್ನು ಪ್ರತ್ಯೇಕಿಸಿ ಕೊಡುವುದನ್ನು ಕಡಿಮೆ ಮಾಡಿ ಎಲ್ಲರನ್ನೂ ಮಾತನಾಡಿಸಲು ಒಂದಿಷ್ಟು ಸಮಯವನ್ನು ಸಮುದಾಯದ ಮತ್ತು ಸಾಮಾನ್ಯ ಜನರೊಂದಿಗೆ ತೊಡಗಿಸಿಕೊಂಡರೆ ನಮ್ಮ ಸಮುದಾಯಕ್ಕೆ ಭರವಸೆ ಮೂಡುತ್ತದೆ ಮತ್ತು ನಮ್ಮ ಪೂಜ್ಯಶ್ರೀಗಳು ದಿವ್ಯ ಚೇತನರು ಅವರ ಆಶೀರ್ವಾದ ನಮ್ಮ ಕಷ್ಟಗಳನ್ನು ದೂರ ಮಾಡುವ ನೆರಳಾಗಿ ಇರುತ್ತದೆ ಎಂಬ ಭರವಸೆಯಿಂದ ಮತ್ತಷ್ಟು ಒಕ್ಕಲುತನದಲ್ಲಿ ತೊಡಗಿಸಿಕೊಂಡು ಒಗ್ಗಟ್ಟಿಗೆ ಕೈಹಾಕುವ ನಿಟ್ಟಿನಲ್ಲಿ ಎಲ್ಲರಿಗೂ ಧೈರ್ಯ ಬರುತ್ತದೆ.

ಸಂಘಟನೆಗೆ ಹೊಸ ಭಾಷ್ಯ:

ಪೂಜ್ಯ ಶ್ರೀಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವ ಬದಲು ತಮ್ಮ ಶಾಖ ಮಠದ ಶ್ರೀಗಳನ್ನು ಅಥವಾ ಶಿಷ್ಯರನ್ನು ಅಲ್ಲಿಗೆ ಕಳುಹಿಸಬೇಕು ಮತ್ತು ಅಂತರರಾಷ್ಟ್ರೀಯ ಮಟ್ಟದ ಎಲ್ಲರನ್ನು ನಮ್ಮ ಮೂಲಮಠದ ವ್ಯಾಪ್ತಿಗೆ ಕರೆತಂದು ಇಲ್ಲಿನ ಒಕ್ಕಲುತನದ ಸಾಂಪ್ರದಾಯಕ ವ್ಯವಸ್ಥೆಯಲ್ಲಿ ತೊಡಗಿಕೊಂಡಿರುವ ಕುಲಬಾಂಧವರಿಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಮತ್ತು ಹೇಗೆ ಎಲ್ಲರನ್ನು ಜೊತೆಗೂಡಿಸಿಕೊಂಡು ಹೋಗಬಹುದು ಹಾಗೂ ಸಮುದಾಯವನ್ನು ಒಳಪಂಗಡಗಳ ಐಕ್ಯತೆಯನ್ನು ಸಾಧಿಸಲು ಏನು ಮಾಡಬೇಕು ಎಂಬ ವಿಚಾರಗಳನ್ನು ಗುರು ಸ್ಥಾನದಲ್ಲಿ ಹೇಳುವ ಜವಾಬ್ದಾರಿಯನ್ನು ಮರೆಯುವುದುಂಟೆ.

ರಾಮನ ಆದರ್ಶ ಮತ್ತು ನಾಡಿನ ಪ್ರೀತಿ:

ಮತ್ತೊಂದು ಸೂಕ್ಷ್ಮ ವಿಚಾರ ಮತ್ತು ಅವಶ್ಯಕ ವಿಚಾರ ಎಂದರೆ ಅಂದು ರಾಮ ಲಕ್ಷ್ಮಣರ ಮಧ್ಯೆ ನಡೆದ ವೃತ್ತಾಂತವನ್ನು ಸ್ವಾಮೀಜಿರವರು ಮರೆಯದೆ ಮುಂದುವರಿಸಬೇಕು. ಅದೇನೆಂದರೆ ರಾವಣನನ್ನು ಸಂಹರಿಸಿದ ನಂತರ ಲಂಕೆಯಲ್ಲಿ ಶ್ರೀರಾಮನ ಭ್ರಾತೃತ್ವದ ಪ್ರೀತಿಯಲ್ಲಿ ಲಕ್ಷ್ಮಣನು ಶ್ರೀರಾಮನಿಗೆ ಹೇಳುತ್ತಾನೆ "ಅಣ್ಣ ಅಯೋಧ್ಯೆಯಲ್ಲಿ ಏನಿದೆ ಬದಲಿಗೆ ಲಂಕೆಯು ಸ್ವರ್ಣಮಯವಾಗಿದೆ ಮತ್ತು ಬಹಳ ಸಂಪತ್ಭೂತವಾಗಿದೆ ನಾವು ಇಲ್ಲೇ ಇದ್ದುಬಿಡೋಣ" ಎಂದು ಹೇಳುತ್ತಾನೆ. ಆಗ ಶ್ರೀರಾಮನು ಅದಕ್ಕೆ ಉತ್ತರಿಸಿ ಲಕ್ಷ್ಮಣನಿಗೆ ಹೇಳುತ್ತಾನೆ:

"ಅಪಿ ಸ್ವರ್ಣಮಯಿ ಲಂಕಾ ನ ಮೇ ಲಕ್ಷ್ಮಣ ರೋಚತೇ |
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ||"
(ಅರ್ಥ: ಲಕ್ಷ್ಮಣನೇ, ಈ ಲಂಕೆಯು ಬಂಗಾರದಿಂದಲೇ ಮಾಡಲ್ಪಟ್ಟಿದ್ದರೂ ನನಗೆ ಇದರ ಮೇಲೆ ಮೋಹವಿಲ್ಲ. ತಾಯಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಶ್ರೇಷ್ಠವಾದುದು.)

ಈ ರೀತಿಯ ಮಾದರಿಯಾಗಿ ಇದ್ದರೆ ನಿಜಕ್ಕೂ ಸಮಸ್ತ ಭಕ್ತರಿಗೆ ಒಳ್ಳೆಯ ಸಂತೋಷವಾಗುತ್ತದೆ ಮತ್ತು ಇದರಿಂದ ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ಸಮುದಾಯದ ಪ್ರತಿಯೊಬ್ಬರು ಮಠಕ್ಕೆ ಮತ್ತಷ್ಟು ದೇಣಿಗೆಯನ್ನು ಭಕ್ತಿಯಿಂದ ನೀಡುತ್ತಾರೆ ಆ ಶಕ್ತಿಯಿಂದ ಸಮುದಾಯಕ್ಕೆ ಮತ್ತಷ್ಟು ಒಳಿತನ್ನು ಮಾಡಬಹುದು.

ಉಪಸಂಹಾರ:

ಇವೆಲ್ಲವೂ ಸತ್ಯವೇಯಾದರು ಪ್ರಸಕ್ತ ಕಲಿಯುಗ ಆದ್ದರಿಂದ ಪೂಜ್ಯಶ್ರೀಗಳು ಸಹ ಕೆಲವೊಮ್ಮೆ ಭಕ್ತರ ಅಹವಾಲುಗಳಿಗೆ ಸ್ಪಂದಿಸಬೇಕಾಗುತ್ತದೆ ಅಂತಹ ಸಂದರ್ಭದಲ್ಲಿ ಕೆಲವೊಮ್ಮೆ ಸಿದ್ಧಾಂತಗಳನ್ನು ಮೀರುವುದಿಲ್ಲವಾದರೂ ಮಿಂದು ಹೋಗುವ ಅವಸ್ಥೆ ಜೀವನದ ಪಯಣದಲ್ಲಿ ಬಂದು ಹೋಗುತ್ತದೆ. ಇದೆಲ್ಲವನ್ನು ಬಹಳ ವೈಚಾರಿಕತೆ ಮತ್ತು ಜ್ಞಾನದಿಂದ ನಡೆಸಿಕೊಂಡರೆ ನಿಜಕ್ಕೂ ನಮ್ಮ ಪೂಜ್ಯಶ್ರೀಗಳಿಗಿರುವ ಅಗಾಧವಾದ ಬ್ರಹ್ಮಾಂಡದ ಜ್ಞಾನವು ಅಖಂಡ ಜ್ಯೋತಿಯಾಗಿ ಸಮುದಾಯವನ್ನು ಕಾಪಾಡುತ್ತದೆ ಮತ್ತು ಮೋಕ್ಷ ಪಥವು ಸತ್ಕರ್ಮಗಳಿಂದ ಮತ್ತಷ್ಟು ಭೈರವನ ಆಶೀರ್ವಾದಕ್ಕೆ ಶಕ್ತಿ ತುಂಬುತ್ತದೆ.

ಸಮುದಾಯದ ಶಕ್ತಿ ಮಠದ ಅಡಿಪಾಯದಲ್ಲಿ ಅಡಗಿದೆ. ಕೇವಲ ವೈಭವೀಕರಣದಿಂದ ಸಮಾಜದ ಉದ್ಧಾರ ಸಾಧ್ಯವಿಲ್ಲ. ಬೆವರು ಸುರಿಸಿ ಮಣ್ಣಿನಲ್ಲಿ ದುಡಿಯುವ ರೈತನೂ ಮಠದ ಹಜಾರದಲ್ಲಿ ಸಮಾನ ಗೌರವ ಪಡೆಯುವಂತಾಗಲಿ. ಶ್ರೀಮಠವು ಕೇವಲ ಕಟ್ಟಡಗಳ ಸಮೂಹವಾಗದೆ, ನೊಂದವರ ಪಾಲಿನ ಸಾಂತ್ವನದ ಕೇಂದ್ರವಾಗಲಿ. ಒಕ್ಕಲಿಗರ ಪ್ರತಿಯೊಂದು ಹನಿ ಬೆವರು ಮಠದ ಬೆಳವಣಿಗೆಗೆ ಶಕ್ತಿಯಾಗಿರುವಾಗ, ಮಠದ ಪ್ರತಿಯೊಂದು ನಿರ್ಧಾರವೂ ಸಮುದಾಯದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗಾಗಿಯೇ ಇರಲಿ. ಭೈರವನ ಆಜ್ಞೆಯಂತೆ ಧರ್ಮ ರಕ್ಷಣೆ ಎಂದರೆ ಸಮುದಾಯದ ರಕ್ಷಣೆಯೂ ಹೌದು.

Made by- ಸತ್ಕರ್ಮಯೋಗಿ ಶ್ರೀ ಅಂತರಗಂಗಾಧರನಾಥ ಸ್ವಾಮೀಜಿ